ಯೊಮಿಯುರಿ ಶಿಂಬುನ್
ಜಪಾನಿನ ಒಂದು ದಿನಪತ್ರಿಕೆ, ಟೋಕಿಯೊದಲ್ಲಿ 132 ವರ್ಷಗಳಿಂದ ಪ್ರಕಟವಾಗುತ್ತಿದೆ. ನಿಸುಶಾ ಎಂಬಾತ ಈ ದಿನಪತ್ರಿಕೆಯನ್ನು ನವೆಂಬರ್ 1874ರಲ್ಲಿ ಮ್ಯಾಕಿಯೊನ ಟೊರಾನೊಮನ ಎಂಬಲ್ಲಿ ಪ್ರಾರಂಭಿಸಿದ. ಚೀನೀ ಲಿಪಿಯನ್ನು ಆಧಾರವಾಗಿಟ್ಟುಕೊಂಡು ಭಾಷಾಧ್ವನಿ ರೂಪಕಗಳನ್ನು ಬಳಸಿ ಪತ್ರಿಕೆಯನ್ನು ಅಚ್ಚು ಮಾಡಲಾಗುತ್ತಿತ್ತು. ಪ್ರಾರಂಭದಲ್ಲಿ ಈ ಪತ್ರಿಕೆ ಟಾಬ್ಲಾಯ್ಡ್‍ರೂಪದಲ್ಲಿ ತರಲಾಗುತ್ತಿತ್ತು. ಆಗಸ್ಟ್ 1894ರಲ್ಲಿ ಚೀನ ಮತ್ತು ಜಪಾನಿನ ಯುದ್ಧ ಕಾಲದಲ್ಲಿ ಸುದ್ದಿಯ ಪ್ರಮಾಣ ಜಾಸ್ತಿಯಾದ್ದರಿಂದ ಟಾಬ್ಲಾಯ್ಡ್ ಆಕಾರವನ್ನು ವಿಸ್ತಾರವಾದ ಪುಟಕ್ಕೆ ಪರಿವರ್ತಿಸಲಾಯಿತು. 1901ರಲ್ಲಿ ಪ್ರಥಮಬಾರಿಗೆ ಈ ಪತ್ರಿಕೆಯ ವರ್ಗೀಕೃತ ಜಾಹಿರಾತು ಪುಟವನ್ನು ಪ್ರಾರಂಭಿಸಲಾಯಿತು. 1914ರಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಪುಟವೊಂದನ್ನು ಮೀಸಲಿರಿಸಲಾಯಿತು. 1917ರಲ್ಲಿ ನಿಸುಶಾ ಎಂಬ ಕಂಪನಿಯ ಹೆಸರನ್ನು ಯೊಮಿಯುರಿ ಶಿಂಬುನ್ ಎಂಬುದಾಗಿ ಬದಲಾಯಿಸಲಾಯಿತು. ಮಟ್ಸು ಟಾಕಿಲಾ ಷೊರಿಕಿ ಎಂಬುವವರು 1924ರಲ್ಲಿ ಈ ಪತ್ರಿಕೆಯ ಏಳನೆಯ ಅಧ್ಯಕ್ಷರಾದರು. ಇವರ ಆಡಳಿತ ಕಾಲದಲ್ಲಿ ಈ ಪತ್ರ್ರಿಕೆ ಅಪಾರ ಜನಪ್ರಿಯತೆ ಗಳಿಸಿತು. ಜಪಾನಿನಲ್ಲಿ ಪ್ರಥಮ ಬಾರಿಗೆ ಬಾನುಲಿ ಪುಟವನ್ನು ಯೊಮಿಯುರಿ ಶಿಂಬುನ್ 1925ರಲ್ಲಿ ಪ್ರಾರಂಭಿಸಿತು. 1931ರಲ್ಲಿ ಬೆಳಗಿನ ಪತ್ರಿಕೆಯನ್ನೂ ಹೊರಡಿಸಿತು. ಸಾಮಾನ್ಯವಾಗಿ ಪ್ರತಿದಿನ 48 ಪುಟಗಳಿದ್ದು ಭಾರತೀಯ ಚಲಾವಣೆ ಹಣದಲ್ಲಿ ಇದೆ ಬೆಲೆ ರೂ.40 ಅಗಿರುತ್ತದೆ. ಪ್ರತಿ ದಿನ ಬೆಳಗ್ಗೆ ಒಂದು ಕೋಟಿಗಿಂತ ಹೆಚ್ಚು ಮತ್ತು ಸಂಜೆ ಅರ್ಧಕೋಟಿ ಪತ್ರಿಕೆ ಖರ್ಚಾಗುತ್ತದೆ. ಜಗತ್ತಿನ ಎಲ್ಲ ಪತ್ರಿಕೆಗಳನ್ನೂ ಪ್ರಸಾರದಲ್ಲಿ ಹಿಂದೆ ಹಾಕಿದೆ. ಈ ಪತ್ರಿಕೆ ದಾಖಲೆಗಳ ಮೇಲೆ ದಾಖಲೆ ಸ್ಥಾಪಿಸಿದೆ. ಉತ್ತಮ ಗುಣಮಟ್ಟ, ವೈವಿಧ್ಯ ಸ್ವಾರಸ್ಯ ವಿಷಯ, ಸುದ್ದಿಗಳನ್ನೊಳಗೊಂಡ ಈ ಪತ್ರಿಕೆ ಆಕರ್ಷಕ ಮುದ್ರಣಕ್ಕೂ ಹೆಸರಾದುದು. ಟೋಕಿಯೊದ ಒಟೆಮಾಚಿ ಚಿಯೊಡಾಕ ಎಂಬಲ್ಲಿ ಈ ಪತ್ರಿಕೆಯ ಮುಖ್ಯ ಕಚೇರಿಗಳಿವೆ. ಇವಲ್ಲದೆ ಹೊಕೈಡೊ, ಹೊಕೊರಿಕು, ಒಸಾಕಸೈಬು, ಚುಬೂಗಳಲ್ಲಿ ಇದರ ಕಚೇರಿಗಳಿವೆ. ಜಪಾನಿನ 18 ಸ್ಥಳಗಳಲ್ಲಿ ಏಕಕಾಲದಲ್ಲಿ ಪತ್ರಿಕೆ ಮುದ್ರಣವಾಗುತ್ತದೆ.

	ಜಪಾನಿ ಭಾಷೆಯಲ್ಲಿ `ಶಿಂಬುನ್ ಎಂದರೆ ವೃತ್ತಪತ್ರಿಕೆ ಎಂದರ್ಥ. ಈ ಪತ್ರಿಕೆ ಪ್ರತಿದಿನ ರಾಜಕೀಯ, ಆರ್ಥಿಕ, ಸಾಮಾಜಿಕ, ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳನ್ನು ಅತ್ಯಂತ ಸರಳ, ನೇರ ಹಾಗೂ ವಸ್ತು ನಿಷ್ಠವಾಗಿ ನೀಡುವುದರಿಂದ ಜಪಾನೀಯರ ವಿಶ್ವಾಸಗಳಿಸಿದ. ಈ ಪತ್ರಿಕೆ ಪ್ರಕಟಿಸುವ ವಿಶ್ಲೇಷಕಾತ್ಮಕ ತನಿಖೆ ಬರೆಹಗಳು ಜನತೆ ಮತ್ತು ಸರ್ಕಾರದ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತವೆ. ಶ್ರೇಷ್ಠತಂತ್ರಜ್ಞಾನ, ಅತ್ಯುತ್ತಮ ಸಿಬ್ಬಂದಿಯ ಆಯ್ಕೆ ಮತ್ತು ತರಬೇತಿ ವ್ಯವಸ್ಥೆಯನ್ನು ಒಳಗೊಂಡ ಈ ಪತ್ರಿಕೆ ಓದುಗರಿಗೆ ಶ್ರೇಷ್ಠವಾದುದನ್ನು ಹಾಗೂ ಅತ್ಯಂತ ಉಪಯುಕ್ತವಾದುದನ್ನು ನೀಡುತ್ತದೆ.

	ಪ್ರಪಂಚದಲ್ಲಿ ಜಪಾನೀಯರು ಎಲ್ಲೆಲ್ಲಿ ಇರುತ್ತಾರೊ ಅಲ್ಲೆಲ್ಲ ಅವರಿಗೆ ಶೀಘ್ರವಾಗಿ ಸಮಗ್ರವಾಗಿ ಸುದ್ದಿ ಮತ್ತು ವ್ಯಾಖ್ಯಾನಗಳನ್ನು ತಿಳಿಸುವುದು ಈ ಪತ್ರಿಕೆಯ ಗುರಿ. `ಅಂಡರ್ ವಾಟರ್ ಆಪ್ಟಿಕಲ್ ಕೇಬಲ್ ಹಾಕುವುದರ ಮೂಲಕ ಹಾಗೂ ಉಪಗ್ರಹದ ಮೂಲಕ ವಿಷಯ ಸಂಗ್ರಹಣೆ ವ್ಯವಸ್ಥೆ ಮಾಡಿ ನ್ಯೂ ಯಾರ್ಕ್(1977), ಲಾಸ್ ಏಂಜಲಿಸ್ (1986) ಬಾಂಗ್‍ಕಾಕ್ (1991) ಮತ್ತು ಲಂಡನ್ (1992) ಆವೃತ್ತಿಗಳನ್ನು ಪ್ರಕಟಿಸಲಾಗುತ್ತಿದೆ. ಹೀಗೆ ವಿದೇಶಗಳಲ್ಲೂ ಮುದ್ರಣ, ಪ್ರಸಾರ ಮಾಡಿದ ಪ್ರಥಮ ಜಪಾನೀ ಪತ್ರಿಕೆಯಿದು. ಪ್ರಪಂಚದ ಅತ್ಯತ್ತಮ ಹಾಗೂ ಶ್ರೇಷ್ಠ ಪತ್ರಿಕೆಗಳೊಂದಿಗೆ ನಿಕಟ ಸಂಬಂಧವಿರಿಸಿಕೊಂಡು ಅತ್ಯುತ್ತಮ ಲೇಖನಗಳನ್ನು ಆಯ್ದು ಪ್ರಕಟಿಸುತ್ತದೆ. ತನ್ನ ಉತ್ತಮ ವರದಿ ಹಾಗೂ ವ್ಯಾಖ್ಯಾನಗಳನ್ನು ಕೂಡ ಬೇರೆ ಪತ್ರಿಕೆಗಳಿಗೆ ಒಡಂಬಡಿಕೆಯೊಡನೆ ಕೊಡುತ್ತದೆ. ಭಾರತದ `ದಿ ಹಿಂದೂ ದೈನಿಕ ಈ ಪತ್ರಿಕೆಯೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡಿದೆ.

	ಸಂಪಾದಕೀಯ ಪ್ರಸಾರ, ಮುದ್ರಣ ಹಾಗೂ ಜಾಹೀರಾತು ವಿಭಾಗಗಳಿಗೆ ಒಟ್ಟು 19 ಪ್ರತ್ಯೇಕ ಖಾತೆಗಳ ವಿಂಗಡನೆಯಿದೆ. ಪ್ರತಿ ವಿಭಾಗದಲ್ಲೂ ತಜ್ಞರಿದ್ದಾರೆ. ಪ್ರತ್ಯೇಕ ವಿಭಾಗಗಳ ಸಂಪಾದಕರು ಪ್ರತಿದಿನ ಕೂಡಿ ಪತ್ರಿಕೆಯ ಶೈಲಿ, ಆಕಾರ ಸಾದರಪಡಿಸುವ ಬಗ್ಗೆ ಪರಸ್ಪರ ಕೂಡಿ ಚರ್ಚಿಸುತ್ತಾರೆ. ಸಂಪಾದಕೀಯ ವಿಭಾಗದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 20 ಬೇರೆ ಬೇರೆ ಸಮಿತಿಗಳಿವೆ. ಈ ಪತ್ರಿಕೆ ಪ್ರಪಂಚದ ಎಲ್ಲ ಕಡೆ ಬಾತ್ಮೀದಾರ ಪ್ರತಿನಿಧಿಗಳು ವಿಶೇಷ ವರದಿಗಾರರು ಇದ್ದಾರೆ. ಅಮೆರಿಕದ ವಾಷಿಂಗ್‍ಟನ್ ಪೋಸ್ಟ್, ಚಿಕಾಗೊ ಟ್ರಿಬ್ಯೂನ್, ನ್ಯೂಸ್‍ಡೇ, ಅಮೆರಿಕದ ಗಾರ್ಡಿಯನ್, ವಿಕಾನ ಮಿಸ್ಟ್, ದಿ ಟೈಮ್ಸ್, ಜರ್ಮನಿಯ ಡಿ ವೆಲ್ಟ್, ಭಾರತದ ಹಿಂದೂ - ಹೀಗೆ ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿನ ಪ್ರಮುಖ ಪತ್ರಿಕೆಗಳೊಡನೆ ಸುದ್ದಿಬಾಂಧವ್ಯ ಹೊಂದಿದೆ. ಈಗಾಗಲೇ `ಜಗತ್ತಿನ ಪತ್ರಿಕೆ ಎಂಬ ಗೌರವವನ್ನು ಇದು ಗಳಿಸಿದೆ.

	`ಯೊಮಿಯರಿ ಅಮೆರಿಕ ಎಂಬ ಸಾಪ್ತಹಿಕವನ್ನು ಕೂಡ ಈ ಪತ್ರಿಕೆ ಪ್ರಕಟಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದ ಅನೇಕರು ಯೊಮಿಯರಿ ಶಿಂಬುನ್ ಅಂಕಣ, ಲೇಖನ ಬರೆಯುತ್ತಾರೆ. ರಷ್ಯದ ಮಾಜಿ ಅಧ್ಯಕ್ಷ ಗೊರ್ಬಚೆವ್ ಅಮೆರಿಕದ ಮ್ಯಾಜಿಸ್ಟ್ರೇಟ್ ಸೆಕ್ರೆಟರಿ ಹೆನ್ರಿ ಕಿಸಿಂಜರ್, ಜೆಕೊಸ್ಲೊವಕಿಯಾದ ಅಧ್ಯಕ್ಷ ವಾಕ್ಲಾವ್ ಹವೆಲ್, ಯೂರೋಪಿಯನ್ ಕಮಿಷನ್ನಿನ ಮಾಜಿ ಅಧ್ಯಕ್ಷ ಜೆಕಿನ್ ಡೆಲೋರ್, ಸಂಯುಕ್ತರಾಷ್ಟ್ರ ಸಮಸ್ಥೆಯ ಹೈಕಮೀಷನರ್ ಸಾಡಾಕೊ ಒಗಾಟ ಇವರ ಅಂಕಣಗಳು ಈ ಪತ್ರಿಕೆಯಲ್ಲಿ ತುಂಬ ಜನಪ್ರಿಯವಾದವು.

	ಯೊಮಿಯುರಿ ಶಿಂಬುನ್ ಸುದ್ದಿ ವಿಷಯಗಳನ್ನು ಸಂಗ್ರಹಿಸಲು ತನ್ನದೇ ಜಾಲವನ್ನು ಹೊಂದಿದೆ. ಇದಕ್ಕೆ ಜಪಾನಿನಲ್ಲಿ 132 ಶಾಖಾ ಬ್ಯೂರೊಗಳಿವೆ. 211 ವರದಿಗಾರ ಕಚೇರಿಗಳಿವೆ. ದಿನದ 24 ಗಂಟೆಗಳಲ್ಲೂ ಕಂಪ್ಯೂಟರ್‍ಗಳಲ್ಲಿ ಸುದ್ದಿಗಳ ಸಂಸ್ಕರಣ ನಡೆಯುವ ವ್ಯವಸ್ಥೆ ಉಂಟು. ಇದು ಶೀಘ್ರವಾಗಿ ಸುದ್ದಿಗಳನ್ನು ಅಚ್ಚುಕಟ್ಟಾಗಿ ಕರಾರುವಾಕ್ಕಾಗಿ ಕೊಡಲು ಡಿಜಿಟಲ್ ತಾಂತ್ರಿಕಜ್ಞಾನ ಬಳಸಲಾಗುತ್ತಿದೆ. ಪತ್ರಿಕೆ ಮುದ್ರಿಸಲು ಅತ್ಯಾಧುನಿಕ ರೋಟರಿ ಯಂತ್ರಗಳಿವೆ.

	ಸುಮಾರು 132 ವರ್ಷಗಳ ಇತಿಹಾಸ ಹೊಂದಿರುವ ಯೊಮಿಯುರಿ ಶಿಂಬುನ್ ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಪಡೆದಿದೆ. ಜಪಾನಿನ `ನಿಹಾನ್ ಶಿಂಬುನ್ ಕೈಕೊ ಅಂದರೆ ಜಪಾನಿನ ಪತ್ರಿಕಾ ವ್ಯವಸ್ಥಾಪಕ ಮತ್ತು ಸಂಪಾದಕ ಪ್ರಶಸ್ತಿಯನ್ನು ಇದು 1966, 1974, 1977 ಮತ್ತು 1978ರಲ್ಲಿ ಪಡೆದಿದೆ. ವೇನ್-ಉದಾ ಪ್ರಶಸ್ತಿಯನ್ನು ಮೂರು ಬಾರಿ ಮತ್ತು ಪತ್ರಿಕಾ ಸಂಘದ ಪ್ರಶಸ್ತಿಯನ್ನು 1953 ರಿಂದ ಹಲವಾರು ಬಾರಿ ಪಡೆದಿದೆ.	
				 
 (ಎನ್.ಯು.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ